ಪ್ರೌಟ್, ವಿಲಿಯಮ್
	1785-1850. ಇಂಗ್ಲೆಂಡಿನ ರಸಾಯನ ಮತ್ತು ಶರೀರ ವಿಜ್ಞಾನಿ, 1785 ಜನವರಿ 15ರಂದು ಜನನ, ವೃತ್ತಿಯಲ್ಲಿ ವೈದ್ಯ, ಆಗ್ರ್ಯಾನಿಕ್ ರಸಾಯನವಿಜ್ಞಾನದಲ್ಲಿ ತುಂಬ ಆಸಕ್ತಿ. ಇನಾಗ್ರ್ಯಾನಿಕ್ ರಸಾಯನದ ಮೇಲಿದ್ದ ಒತ್ತು ಜೀವಕೋಶದ ಕಡೆಗೆ ವಾಲಿದ ಕಾಲವದು. ಪೆಲ್ಟ್ಯೀ ಗುತ್ರಿ ಮತ್ತು ಕಿಡ್ ಅವರ ಸಂಶೋಧನೆಗಳಿಂದ ಈ ನೂತನ ವಿಜ್ಞಾನವಿಭಾಗ ಫಲವತ್ತಾಗಿ ಬೆಳೆಯಿತು. ಆಹಾರ ಜೀರ್ಣವಾಗಲು ಜಠರದಲ್ಲಿ ಉತ್ಪತ್ತಿಯಾಗುವ ಹೈಡ್ರೊಕ್ಲೋರಿಕ್ ಆಮ್ಲ ಕಾರಣ ಎಂಬ ವಿಚಾರ ಪ್ರೌಟನ ಸಂಶೋಧನೆಯಿಂದ ತಿಳಿಯಿತು. ಲೋಹಗಳನ್ನೇ ತಿಂದುಹಾಕಬಲ್ಲ ಈ ಆಮ್ಲ ಜಠರದಲ್ಲಿ ಕಾಣಸಿಗುವುದು ಒಂದು ಆಶ್ಚರ್ಯವೇ ಸರಿ. ಆಹಾರ ಪದಾರ್ಥಗಳಲ್ಲಿರುವ ಕಾರ್ಬೋಹೈಡ್ರೇಟ್, ಮೇದಸ್ಸು ಮತ್ತು ಪ್ರೋಟೀನುಗಳನ್ನು ಗುರುತಿಸಿ ಅವು ಬೇರೆ ಬೇರೆ ಎಂಬುದನ್ನು ಈ ಮೊದಲು ತೋರಿಸಿದಾತ ಪ್ರೌಟ್, ಇವನ ಕೀರ್ತಿ ಈಗ ಉಳಿದಿರುವುದು ಧಾತುಗಳ ಪರಮಾಣು ತೂಕಗಳ ಬಗ್ಗೆ ಇವನು ಅನಾಮಿಕನಾಗಿ ಪ್ರಕಟಿಸಿದ ಒಂದು ಲೇಖನದಿಂದ. ಹೈಡ್ರೊಜನ್ ಪರಮಾಣು ಎಲ್ಲ ಪರಮಾಣುಗಳಿಗಿಂತ ಕಡಿಮೆ ತೂಕ ಉಳ್ಳದ್ದು. ಇದರ ತೂಕ 1 ಏಕಮಾನ ಎಂದಿಟ್ಟುಕೊಂಡರೆ ಇಂಗಾಲ, ನೈಟ್ರೊಜನ್, ಆಕ್ಸಿಜನ್, ಸೋಡಿಯಮ್ ಮುಂತಾದ ಧಾತುಗಳ ಪರಮಾಣವಿಕತೂಕಗಳು ಅನುಕ್ರಮವಾಗಿ 12, 14, 16, 23 ಏಕಮಾನಗಳು ಎನ್ನಬಹುದು. ಇದನ್ನು ಗಮನಿಸಿದ ಪ್ರೌಟ್ ಎಲ್ಲ ಧಾತುಗಳ ಪರಮಾಣುಗಳೂ ಹೈಡ್ರೊಜನ್ನಿನ ಪರಮಾಣುಗಳಿಂದಲೇ ಆಗಿವೆ ಎಂಬ ಅಭಿಪ್ರಾಯ ಮಂಡಿಸಿದ. ಇದಕ್ಕೆ ಪ್ರೌಟನ ಆಧಾರ ಕಲ್ಪನೆ ಎಂದು ಹೆಸರು. ಇದನ್ನು ಪರೀಕ್ಷಿಸಲು ವಿಜ್ಞಾನಿಗಳು ಪರಮಾಣುವಿನತೂಕಗಳನ್ನು ಹೆಚ್ಚು ನಿಖರವಾಗಿ ಅಳೆಯಲು ಮುಂದಾದರು. ಇದು ಸರಿಯಲ್ಲ ಎಂದು ಈ ಅಳತೆಗಳಿಂದ ತಿಳಿಯಿತು. ಪ್ರೋಟನ್, ನ್ಯೂಟ್ರಾನ್ ಮತ್ತು ಎಲೆಕ್ಟ್ರಾನುಗಳ ಆವಿಷ್ಕಾರವಾದ ಬಳಿಕ ಪರಮಾಣುವಿನತೂಕಗಳನ್ನು ಅರ್ಥ ಮಾಡಿಕೊಳ್ಳುವುದರಲ್ಲಿದ್ದ ತೊಡಕುಗಳು ನಿವಾರಣೆಯಾದುವು. ಪ್ರೌಟ್ 1850 ಏಪ್ರಿಲ್ 9 ರಂದು ನಿಧನನಾದ.
				(ಎಸ್‍ಎ.ಎಚ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ